ಮಾರಕೈಬೊ
ವೆನಿಜ್ವೇಲ ದೇಶದ ಜೂóಲ್ಯಾ ಜಿಲ್ಲೆಯ ಆಡಳಿತಕೇಂದ್ರ ನಗರ.  ದೇಶದ ಎರಡನೆಯ ದೊಡ್ಡನಗರವಾದ ಇದನ್ನು ಸುಮಾರು 1529ರಲ್ಲಿ ಸ್ಥಾಪಿಸಲಾಯಿತು.  ಜನಸಂಖ್ಯೆ 8,45,000 (1978).  ಉತ್ತರ ಅಕ್ಷಾಂಶ 100 40' ಪಶ್ಚಿಮ ರೇಖಾಂಶ 710 40' ರಲ್ಲಿದೆ.  ಪೆಟ್ರೋಲಿಯಮ್ ಕಂಡು ಹಿಡಿಯುವ ತನಕ (1912) ಈ ನಗರ ಕಾಫಿ ರಫ್ತು ಮಾಡುವ ಬಂದರಾಗಿತ್ತು.  ಅನಂತರ ಆದ ಬದಲಾವಣೆಗಳಿಂದ ವೆನಿಜ್ವೇಲದ ಮಹಾನಗರವೆನಿಸಿಕೊಂಡಿತು.  ಅನಂತರ ಆದ ಬದಲಾವಣೆಗಳಿಂದ ವೆನಿಜ್ವೇಲದ ಮಹಾನಗರವೆನಿಸಿಕೊಂಡಿತು.  ಇಲ್ಲಿ ಸ್ಪಾನಿಷ್ ಸಂಸ್ಕøತಿಯ ಆಧುನಿಕ ಶಿಲ್ಪ ಕಲೆಗಳಿಂದ ಕೂಡಿದ ಭವ್ಯಕಟ್ಟಡಗಳು ಇವೆ.  1950ರಲ್ಲಿ ಮಾರಕೈಬೊ ಕಾಲುವೆ ತೆಗೆದು ಕೆರೀಬಿಯನ್ ಸಮುದ್ರದ ಮಾರ್ಗ ಏರ್ಪಟ್ಟು ನಗರ ಬಹುಮುಖ ಪ್ರಗತಿ ಕಂಡಿತು.  ಮಾರಕೈಬೊ ನಗರದ ಬಳಿ 1700 ಹೆಕ್ಟೇರಿನಷ್ಟು ಕೈಗಾರಿಕಾ ವಲಯವಿದ್ದು ಇಲ್ಲಿ ರಾಸಾಯನಿಕ ವಸ್ತುಗಳು, ಕೈಮಗ್ಗದ ಸರಕುಗಳು, ಪಾನೀಯಗಳು, ಹಗ್ಗ ಮತ್ತು ಟೈನ್ ದಾರ ತಯಾರಿಸಲ್ಪಡುತ್ತವೆ.  1946ರಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು.  ಉತ್ತರ ವೆನಿಜ್ವೇಲದ ಒಳನಾಡಿನ ಪ್ರಮುಖ ನಗರಗಳೊಡನೆ ಈ ನಗರ ಸಂಪರ್ಕ ಹೊಂದಿದೆ.  ಇಲ್ಲಿಯ ಹವಾಗುಣ ವಿಪರೀತ ಏರುಪೇರಿನದು.  ಹೆಚ್ಚಿನ ಉಷ್ಣತೆಯಿಂದ ಈ ನಗರ ದಕ್ಷಿಣ ಅಮೆರಿಕದ ಅತೀ ಉಷ್ಣತೆಯ ನಗರವೆನಿಸಿದೆ.  ಪ್ರಪಂಚದ ಒಂದು ಮುಖ್ಯ ತೈಲ ನಗರವೆನಿಸಿದ್ದು ವ್ಯಾಪಾರ ಹಾಗೂ ಕೈಗಾರಿಕಾ ದೃಷ್ಟಿಯಿಂದಲೂ ಬಲು ಪ್ರಮುಖ ನಗರವಾಗಿ ಆಧುನಿಕವಾದ ಎಲ್ಲ ನಾಗರಿಕ ಸೌಲಭ್ಯಗಳನ್ನೊಳಗೊಂಡು ಬೆಳೆದಿದೆ.  ಸರೋವರದ ಮೂಲಕ ಸರಕುಗಳ ಸಾಗಣೆಗೆ ಅನುಕೂಲವಿದೆ.  ಕಾಫಿ, ಸಕ್ಕರೆ, ಕೋಕೋ, ಮರದ ತುಂಡುಗಳನ್ನು ಸಾಗಿಸಲಾಗುತ್ತದೆ.
ಈ ನಗರಕ್ಕೆ ಹೆಸರು ಬಂದಿರುವ ಮಾರಕೈಬೊ ಸರೋವರ ಕೆರೀಬಿಯನ್ ಸಮುದ್ರದ ದೊಡ್ಡ ಹಿನ್ನೀರಿನ ಸರೋವರವಾಗಿದೆ.  ಇದರ ವಿಸ್ತೀರ್ಣ 13,000 ಚಕಿಮೀ.  ವೆನಿಜ್ವೇಲ ಖಾರಿಯಿಂದ ದಕ್ಷಿಣಕ್ಕೆ 210ಕಿಮೀ ವಿಸ್ತರಿಸಿದ್ದು 75ಮೀ ನಷ್ಟು ಅಗಲವಾಗಿದೆ.  ಈ ಸರೋವರ ಪ್ರಪಂಚದ ಸಂಪದ್ಭರಿತ ಎಣ್ಣೆದೊರೆಯುವ ಕೇಂದ್ರಸ್ಥಾನದಲ್ಲಿದೆ.  1912ರಲ್ಲಿ ಪ್ರಥಮಬಾರಿಗೆ ಇಲ್ಲಿ ಬಾವಿ ಕೊರೆಯಲ್ಪಟ್ಟಿತು.  ಪ್ರಸ್ತುತ ಸುಮಾರು 105 ಕಿಮೀ ಪ್ರದೇಶವನ್ನು ಒಳಗೊಂಡಿದೆ.  ವೆನಿಜ್ವೇಲದ ಒಟ್ಟು ಪೆಟ್ರೋಲಿಯಮ್ ಉತ್ಪಾದನೆಯ 2/3 ಭಾಗದಷ್ಟು ಈ ಸರೋವರದ ಸುತ್ತಮುತ್ತಲ ಪ್ರದೇಶದಿಂದಲೇ ತೆಗೆಯಲಾಗುತ್ತದೆ.  ಇಲ್ಲಿಯ ಅನೇಕ ಎಣ್ಣೆ ಪ್ರದೇಶಗಳು ವಿದೇಶೀಯರ ಕೈವಶದಲ್ಲಿವೆ.  ಈ ಸರೋವರದ ದಕ್ಷಿಣ ಗಡಿಭಾಗದಲ್ಲಿ ಬೇಸಾಯ ಮಾಡಲಾಗುತ್ತಿದೆ.  ಅಲ್ಲಲ್ಲಿ ತೆಂಗು, ಕಬ್ಬು ಮತ್ತು ಕಾಫಿ ತೋಟಗಳು ಇವೆ.  ಈ ಬಂದರಿನ ಮೂಲಕ ಸರೋವರದ ತೀರದಲ್ಲಿರುವ ಮುಖ್ಯ ನಗರಗಳಿಗೆ ಸಂಪರ್ಕವಿದೆ.
			  (ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ